ಮತ್ತೆ ಬಾರದ ಲೋಕ !

DSC07283

ಸಾವು ಮತ್ತು ನಾವು

“ಸಾವು”… ಎರಡೇ ಅಕ್ಷರ.ಯಾರನ್ನಾದರು ಒಮ್ಮೆ ತಲ್ಲಣಗೊಳಿಸುವ ಒ೦ದು ಶಬ್ಧ.

ಏನಿದು ಸಾವು ?

ಒಮ್ಮೆ ಹೆದರಿಕೊಳ್ಳಿ..ಜೀವನ ಅರ್ಥವಾಗುವುದು.

ಆ ದಿನ ಸೂರ್ಯನು ಉದಯಿಸಿರುತ್ತಾನೆ.ಆದರೆ ನಿನಗೆ ಬೆಳಗಾಗುವುದಿಲ್ಲ.

ಮರುದಿನ ನಿನ್ನ ಮನೆಯಲ್ಲಿ ಕತ್ತಲಿರುತ್ತದೆ.ನೀನು ದೀಪ ಹಚ್ಚಲಾಗುವುದಿಲ್ಲ.

ಎ೦ದೋ ನಿನ್ನ ತಾಯಿ ಅಡುಗೆ ಮನೆಯಲ್ಲಿ ಅಡುಗೆ ಮಾಡುತ್ತಿರುತ್ತಾಳೆ,ಆದರೆ ನಿನಗೆ ಹಸಿವಾಗುವುದಿಲ್ಲ.

ಎ೦ದೋ ನಿನ್ನ ಸ್ನೇಹಿತರು ಯಾವುದೋ ಸ೦ಭ್ರಮದಲ್ಲಿರುತ್ತಾರೆ,ಅವರ ನಗುವಿನಲ್ಲಿ ನೀನಿರುವುದಿಲ್ಲ.

ನಿನ್ನ ಪ್ರೇಯಸಿಯು ನಿನಗಾಗಿ ಕಾದಿರುತ್ತಾಳೆ,ಆದರೆ ನೀನು ಅವಳಿರುವ ಕಡೆ ಹೋಗಲಾಗುವುದಿಲ್ಲ.

ಏನಾದರು ಮಾಡಲು ಅ೦ದು ನಿನ್ನ ದೇಹವು ಹಾತೊರೆಯುತ್ತದೆ ಆದರೆ ಅದರೊಳಗೆ ನೀನಿರುವುದಿಲ್ಲ.

ಅರ್ಧ ಪೂರೈಸಿದ್ದ ಕನಸು ನಿನ್ನ ಸುತ್ತಲೂ ಅಲೆದಾಡುತ್ತಿರುತ್ತದೆ.ಅದನ್ನು ನೀನು ತಡೆಯಲಾಗುವುದಿಲ್ಲ.

ಜಗವು ಅ೦ದು ಅತೀ ವೇಗದಲ್ಲಿ ಚಲಿಸುತ್ತಿರುತ್ತದೆ,ನೀನು ಹಿಡಿಯಲಾಗುವುದಿಲ್ಲ.

ಅಸ್ತಿತ್ವದಲ್ಲಿರುವ ಯಾವ ಕ್ರಿಯೆಗಳು ನಿನಗಾಗಿ ಅ೦ದು ಕಾಯುವುದಿಲ್ಲ….

ಅ೦ದು ಯಾವುದು ನಿನ್ನ ಪಾಲಿಗೆ ದಕ್ಕದಿದ್ದರೂ ನೀ ಅ೦ಜಬೇಡ.

ಸುತ್ತಲೂ ಒಮ್ಮೆ ನಗುತ್ತಲೇ ತಿರುಗಿ ನೋಡು…..ಅದು ಮತ್ತೆ ಬಾರದ ಲೋಕ !

ಅಲ್ಲಿಗೆ ನಿನ್ನನ್ನು ಏನೋ ಅರೆಸಿ ಬ೦ದಿರುತ್ತದೆ.ಅದನ್ನು ಅಲ್ಲಗಳೆಯಬೇಡ.ಅದು ಶಾ೦ತಿ.

ನೀ ಉಸಿರಾಡಿದ ದಿನವಷ್ಟು ನಿನಗೇನು ದಕ್ಕದೋ ,ಅದು ನಿನ್ನನ್ನಾಗ ಅರಸಿ ಬರುವುದು.

ಲೌಕಿಕ ಜಗತ್ತಲ್ಲಿ ಶಾ೦ತಿಯೇ ಇಲ್ಲ , ಏಕೆ೦ದರೆ ಮನುಷ್ಯ ತೃಪ್ತನಾಗುವುದಿಲ್ಲ. ಮದ,ಮೋಹ,ಹಣ,ಕಾಮ ಎಲ್ಲವೂ ಲಭಿಸಿ ತೃಪ್ತನಾದೆ ಎ೦ತಾದರೆ ಮತ್ತಷ್ಟು ಬೇಕೆನಿಸುವುದು.ಆಸೆಯ ಅ೦ಚಿನ ಆ ಬದುಕು ನಿತ್ಯ ಪಾಪವಲ್ಲವೇ?

ನಿನ್ನ ಚಿರ ಮೌನದಲ್ಲಿ ನೀ ಬದುಕಿದ ಹಾದಿಯನ್ನು ಒಮ್ಮೆ ಅವಲೋಕಿಸಿ ನೋಡು,ಏನಾದರು ಸತ್ಯ ಕ೦ಡರೆ,

ನೀ ಯುಗಪುರುಷನೇ ಸರಿ !

ಕುಣಿಯುತ್ತಿದ್ದ ಬಕ ಪಕ್ಷಿಯೊ೦ದು ಗೆಜ್ಜೆ ಬಿಚ್ಚಿದ ನಿನ್ನ ಬಾಳಿನಲ್ಲಿ ಭಾವನೆಗಳಿರುವುದಿಲ್ಲ.

ಬದುಕಿದ್ದಾಗ ನಗುತಲಿರು, ನಗಿಸುತಲಿರು .ಸತ್ತ ನ೦ತರ ಸಪ್ತ ಲೋಕವನ್ನು ಅಲೆದು ನೋಡು, ಆ ನಗುವು ಎಲ್ಲಿದೆ ?ಬದುಕ್ಕಿದ್ದಾಗ ಕ್ರೋಧವೊ೦ದೇ ನಿನ್ನ ನೆರಳು , ಎಲ್ಲರನ್ನು ದೂರ ಸರಿಸುತ್ತೀಯ.ಸತ್ತ ನ೦ತರ ನಿನ್ನ ಬಯಕೆ ಹೇಳಿಕೊಳಲು ಕೈ ಚಾಚಿದರೂ ಒ೦ದು ಕರವು ಸಿಗದಾಗುವುದು.ನೀನು ಬದುಕಿದ್ದಾಗ ಜೀವನವನ್ನು ಕಷ್ಟಗಳಿಗೆ ಹೆದರಿ ಕತ್ತಲೆ೦ದು ಭಾವಿಸಿದರೆ ನೀನು ಮೂರ್ಖನಷ್ಟೆ. ಏಕೆ೦ದರೆ ಕತ್ತಲೆ೦ದು ಕಗ್ಗತ್ತಲಲ್ಲ,ಕಾಣೋ ಬೆಳಕು ಸಾಲದು.

ಸಾವು ,ನಮ್ಮ ಅ೦ತ್ಯಕಾಲ.ಎಲ್ಲರೂ ಒ೦ದಲ್ಲ ಒ೦ದು ದಿನ ದೇಹ ತ್ಯಾಗ ಮಾಡಲೇ ಬೇಕು.ಕೆಲವರಿಗೆ ಸಾವು  ಬೇಗನೆ ಕೈ ಬೀಸಿ ಕರೆಯುತ್ತದೆ.ಕೆಲವರು ನೂರಾರು ವರ್ಷ ಠಿಕಾಣಿ ಹೊಡೆದು ಕುಳಿತಿರುತ್ತಾರೆ.ಎಷ್ಟು ವರ್ಷ ಬಾಳಿದೆ ಎ೦ಬುವುದು ಈ ಓಟದ ವಿಚಾರವಲ್ಲ.

ಬದುಕ್ಕಿದ್ದಾಗ ಏನು ಮಾಡಿದೆ ? ಏನಾದರೊ೦ದು ಮಾಡು…

ಮು೦ದಿನ ಕ್ಷಣವೇ ನಿನ್ನ ಸಾವಾಗ ಬಹುದು.ಈ ಕ್ಷಣ ನಗುತಲಿರು,ನಗಿಸುತಲಿರು.

ನಿನ್ನ ಜಗವನ್ನು ನೀ ಮತ್ತೆ ಸೇರಲಾರೆ,

ನಿನ್ನ ಸುತ್ತಲಿನ ಪ್ರಕೃತಿಯಲ್ಲಿ ಮತ್ತೆ ಬೆರೆಯಲಾರೆ,

ನಿನ್ನ ಜನರನ್ನು ಮತ್ತೆ ಹೆಸರು ಹಿಡಿದು ಕರೆಯಲಾರೆ.

ಬದುಕ್ಕಿದ್ದಾಗ ಎಲ್ಲವೂ ಒ೦ದು ಸು೦ದರ ಸೊಬಗು,ಎಲ್ಲವನ್ನೂ ಅನುಭವಿಸಿ…..

ಉಸಿರು ನಿ೦ತ ನ೦ತರ ನಿನ್ನ ಲೋಕವೇ ನಿನಗೆ…..ಮತ್ತೆ ಬಾರದ ಲೋಕ !

ನೀನು ನೆನೆಪು ಮಾತ್ರ.

ಜನರಿಗೆ ನೀನು ನೆನಪಾಗುತ್ತೀಯಾ ?? ನನಗೆ ಡೌಟು ಗುರು…..

-ಜಿ.ಎಲ್.ಶಾಮ್ ಪ್ರಸಾದ್

© 2013 G.L Sham Prasad

ಸಮಯ

Image

ಸಮಯವನ್ನು ಅರೆತವರು ಶತಾಯುಷಿಗಳಾಗುವುದಿಲ್ಲ,ಸಮಯವನ್ನು ಮರೆತವರು  ಸಾವಿಗೆ ಹತ್ತಿರವಾಗುವಿದಿಲ್ಲ.ಸಮಯ ಎ೦ಬುವುದು ಕೇವಲ ಗಡಿಯಾರದೊಳ ಸೀಮಿತವಲ್ಲ.ನಿದ್ರೆ,ಹಸಿವು ಮತ್ತು ಆಶ್ರಯವನ್ನು ಹೇಗೆ ನಮ್ಮ ಜೀವನದ ಅವಿಭಾಜ್ಯ ಅ೦ಗಗಳಾಗಿ ಪರಿಗಣಿಸುತ್ತೀವೋ,ಹಾಗೆ ಸಮಯವನ್ನು ಕೂಡ ಗೌರವಿಸಲೇ ಬೇಕು. ಕಳೆದ ಸಮಯ ಮತ್ತೆ ಬಾರದು.ನೀ ಈ ಮಾನವ ಕುಲದ ಯಾವ ಮತದವನಾದರೂ ಸರಿಯೆ ಸಮಯವು ಎ೦ದಿಗೂ ನಿನ್ನ ಅಧೀನದಲ್ಲಿರುವುದಿಲ್ಲ.ಸಮಯವೆ೦ಬುದು ಸದಾ ನಿನ್ನ ಮುಷ್ಟಿಯಲ್ಲಿರಲಿ, ಅದನ್ನು ದಾನ ಮಾಡದಿರು.ಗಡಿಯಾರದಲ್ಲಿರುವ ಮೂರು ರೆಕ್ಕೆಗಳು –

ಒ೦ದು ನಿನ್ನ ಉಸಿರು,ಮತ್ತೊ೦ದು ವೇಗ ಮೊಗದೊ೦ದು ತಾಳ್ಮೆಯ ಸ೦ಕೇತವೆ೦ದು ನೀ ಭಾವಿಸಿದರೆ ಸಾಕಷ್ಟೆ, ನಿನಗೆ ಸಾಯುಜ್ಯದ  ಮೆಟ್ಟಿಲುಗಳ ದರ್ಶನವಾಗುವುದು.

 

ಮುಗಿಲೆತ್ತರಕ್ಕೆ ಹಾರುವ ಹಕ್ಕಿಗಳ ರೆಕ್ಕೆಯ ಬಡಿತಗಳ ಮುನ್ನ ಒ೦ದು ಸಮಯವಿದೆ,

ಮು೦ಜಾನೆಯ ಸೂರ್ಯನ ಕಿರಣಗಳು ಭೂಮಿಯನ್ನು ಸ್ಪರ್ಶಿಸುವ ಮುನ್ನ ಒ೦ದು ಸಮಯವಿದೆ,

ರಸ್ತೆಯ ಮೇಲೆ ನಮ್ಮ ನೆರಳು ಹರಡುವ ಮುನ್ನ ಒ೦ದು ಸಮಯವಿದೆ,

ಹಸಿದ ಹೆಬ್ಬುಲಿಯು ಬೇಟೆಗಾಗಿ ಇಡುವ ಹೆಜ್ಜೆಯ ಮುನ್ನ ಒ೦ದು ಸಮಯವಿದೆ,

ಕಣ್ ರೆಪ್ಪೆಗಳು ಪಟ ಪಟನೆ ಬಡಿಯುವ ಮುನ್ನ ಒ೦ದು ಸಮಯವಿದೆ,

ಅಲೆಗಳು ದಡವನ್ನು ಸೋಕುವ ಮುನ್ನ ಒ೦ದು ಸಮಯವಿದೆ,

ಮಳೆ ಸುರಿಸುವ ಮೋಡಗಳು ಐಕ್ಯವಾಗುವ ಮುನ್ನ ಒ೦ದು ಸಮಯವಿದೆ,

ಎರಡು ತುಟಿಗಳು ಲೀನವಾಗುವ ಮುನ್ನ ಒ೦ದು ಸಮಯವಿದೆ,

ನಗುವು ಮೊಗದಲ್ಲರಳುವ ಮುನ್ನ ಒ೦ದು ಸಮಯವಿದೆ,

 

ಹೀಗೆ ಪ್ರಕೄತಿಯಲ್ಲಿ ಎಲ್ಲದರ ಮುನ್ನವೂ ಒ೦ದು ಸಮಯವಿದೆ.

ಈಷ್ಟಾದರು ನಾವೆಲ್ಲರು ಬೆಳಕನ್ನು ಹಿಡಿದು ನಮ್ಮ ಜೀವನವನ್ನು ಅರೆಯಲು ಸಾಧ್ಯವಿಲ್ಲದ೦ತಾಗಿದೆ,ಅಲ್ಲವೆ?

 

ಎಲ್ಲದರ ಮುನ್ನವು ಸಮಯವಿದ್ದರು ನಾವು ಅರಿಯಲಾಗುತ್ತಿಲ್ಲ.ಬಿಸಿಲು ಕುದುರೆಯ ಮೇಲೇರಿ, ಮೋಹದ ಗಾಳಕ್ಕೆ ಸಿಲುಕಿ
” ನಾ ಮು೦ದಿದ್ದೇನೆ ! ” ಎ೦ದೇನಾದರೂ ನೀ ಅ೦ದರೆ ಸಮಯವು ನಿನ್ನ ಮೋರೆಯ ನೋಡಿ ನಕ್ಕು , ಒಮ್ಮೆ ಹೊಡೆಯುವುದಷ್ಟೆ,ಏಕೆ೦ದರೆ ನಿನ್ನ ಹಿ೦ದಿರುವುದು ಅದರ ಛಾಯೆ..ಅದರ ನೆರಳೊಮ್ಮೆ ನಮ್ಮ ಹಿ೦ದಿದ್ದು ನಮಗೆ ಅದನ್ನು ಅರೆಯುಲು ಅವಕಾಶವನ್ನು ಕೊಡುತ್ತದೆ ಮಾತ್ರ.ಅದನ್ನು ಹಿ೦ದಿಕ್ಕಿದೆ ಎ೦ಬ ಹೆಗ್ಗಳಿಕೆಯು ಎಲ್ಲರಿಗಲ್ಲ…!

ಸಮಯವನ್ನು ಹಿ೦ದಿಕ್ಕಿ ಓಡಿದವರಿದ್ದಾರೆ.ಅವರ ಯುಗಗಳು ಈಗ ಅ೦ತ್ಯವಾಗಿದೆ.ಆದರೆ ಅವರ ನೆನೆಪಿನ ಆದಿ ನಮ್ಮೆಲ್ಲರ ಸಮಯದ ಮಹತ್ವವನ್ನು ಚಿಗುರೊಡೆಸಿದೆ. ಸ್ವಾಮಿ ವಿವೇಕಾನ೦ದ,ಆದಿ ಶ೦ಕರರು,ಬಸವಣ್ಣನವರು,ಭಗತ್ ಸಿ೦ಘ್,ಚಿ ಗುವೆರ,ಶ೦ಕರ್ ನಾಗರಕಟ್ಟೆ ಹೀಗೆ ಅನೇಕರು ಮಿ೦ಚಿನ೦ತೆ ಬ೦ದು ಕಣ್ಮರೆಯಾಗಿದ್ದಾರೆ.ಅವರದ್ದೆಲ್ಲ ಸಾಮಾನ್ಯವಾದ
ಓಟವಲ್ಲ,ಸಮಯವನ್ನು ಅರೆತು ಜೀವನವನ್ನೇ ಪ್ರಶ್ನಿಸಿದ ಓಟ .

” ಮಗ ಟೈಮ್ ಎಷ್ಟೋ ? “ಎ೦ದು ಕೇಳುವವರಿಗೆ ಏನು ಉತ್ತರಿಸುವುದೋ ತಿಳಿಯದೆ ಕೆಲವೊಮ್ಮೆ ಮೂಕನಾಗಿದ್ದೇನೆ.ಅದಕ್ಕೆ ಉತ್ತರ ಮೌನವಾದರು ಅದರಲ್ಲೊ೦ದು ರೆಕ್ಕೆಯು ಬಣ್ಣವಿಲ್ಲದೆ ಬಡಿಯುತ್ತಿತ್ತು.

” ಸರ್ ! ಏನ್ ಮಾಡ್ತಿದ್ದೀರಾ ಸರ್ ? “ಎ೦ದು ರಸ್ತೆಯ ಬದಿಯಲ್ಲಿ ಕುಳಿತಿದ್ದ ಒಬ್ಬನನ್ನು ಕೇಳಿದ್ದೆ.

” ಸರ್ ! ಸುಮ್ಮನೆ ಕುಳಿತಿದ್ದೇನೆ ! ” ಎ೦ದ ಅವನ ಉತ್ತರಕ್ಕೆ ಒಮ್ಮೆ ನನ್ನಲ್ಲಿಯು ಅದೇ ತೀವ್ರತೆ ಇತ್ತು. ಹಿ೦ದೆ೦ದೋ ಏನು ಮಾಡುವುದೋ ತಿಳಿಯದೆ ನಾನು ಸುಮ್ಮನೆ ಕುಳಿತಿರುತ್ತಿದ್ದ ಉದಾಹರಣೆಗಳು೦ಟು. ಆದರೆ ಸಮಯವನ್ನು ಗೌರವಿಸಲಾರ೦ಭಿಸಿದಾಗ ಲೇಖನಿಯೊ೦ದು ನನ್ನ ಕೈ ಬೆರಳುಗಳ ನಡುವೆ  ಬ೦ದು ಕುಳಿತಿತ್ತು.ಅ೦ದಿನಿ೦ದ ಸಮಯದ ವೇಗವನ್ನು ಸರಿದೂಗಲು ಓಡುತ್ತಿದ್ದೇನೆ,ಇನ್ನು ನಿಲ್ಲುವ ಮನಸ್ಸಿಲ್ಲ.ಸಮಯ ನಮಗಾಗಿ ಕಾದ ಉದಾಹರಣೆಗಳಿಲ್ಲ.ಏ೦ದಾದರೊಮ್ಮೆ ಕಾಯುತ್ತದೆ ಎ೦ಬ ಊಹೆಯಿದ್ದರೆ ಅದನ್ನು ಕೊಲ್ಲಬೇಕು.

ಸಮಯವನ್ನು ಗೌರವಿಸಲು ಪ್ರತಿಕ್ಷಣವೂ ಎಲ್ಲರು ಏನಾದರೊ೦ದು ಕೆಲಸ ಮಾಡಲೇ ಬೇಕಾಗಿಲ್ಲ.ಪ್ರತಿ ಕ್ಷಣವು ಹೊಸತನ,ನಮ್ಮ ಜೀವನದ ಬಗ್ಗೆ ಯೋಚಿಸಿದರೆ ಸಾಕಷ್ಟೆ,ಎ೦ದಾದರೊಮ್ಮೆ ಸಮಯವು ನಮ್ಮ ಸ್ನೇಹವನ್ನರೆಸಿ ಬರುವುದು.

ದ್ರೋಹ,ದ್ವೇಷ,ಅಸೂಯೆ,ಕಣ್ಣೀರು,ಯುದ್ಧ,ಕ್ರೋಧಗಳೆ೦ದಿಗು ಸಮಯದ ಗಡಿಯಾರದೊಳ ಅ೦ಕಿಗಳಲ್ಲ.ಇದ್ದರೆ ಅದೆಲ್ಲವನ್ನು ಅಳಿಸಿ ಹಾಕಿ… ಇರುವುದೊ೦ದೇ ಜೀವನ,ಸಿಗುವುದೊ೦ದೇ ಸಾಯುಜ್ಯವೆ೦ದು ತಿಳಿದು ಸಾಗುತ್ತಿರಿ.ಪ್ರತಿದಿನವು ಒದಗುವ ಸಿಹಿಯ ಕ್ಷಣಗಳನ್ನು ಮೆಲಕು ಹಾಕಿ.ಕತ್ತಲೆ೦ದು ಶಾಶ್ವತವಲ್ಲ ಅದನ್ನು ಕ೦ಡ ಕಡೆ ಬಡಿದು ಹಾಕಿ.

ಈ ಕ್ಷಣ ನಿಮ್ಮದು ,ಈ ಬದುಕು ನಿಮ್ಮದು ,

ಹೊಸತನದ ಹಾದಿಯಲ್ಲಿ  ಕೈ ಗಡಿಯಾರವನ್ನು ತೊಟ್ಟು ಪಯಣವನ್ನು ಆರ೦ಭಿಸಿ…

ಎಚ್ಚರ……!!  ಸಮಯವನ್ನು…. ಒಮ್ಮೆ ತಿರುಗಿ ನೋಡಿ !

 

” ಮಗ ಹೊಸ ಗಡಿಯಾರ ತಗೊ೦ಡೆ !! ಕೆಲಸ ಇದೆ ..ಹೊರಡ್ತಿನಿ ! “

” ಸರ್ ! ಜೀವನದಲ್ಲಿ ಏನಾದ್ರು  ಹೊಸದಾಗಿ ಮಾಡಣ ಅ೦ತ ಇದೀನಿ “

ಎನ್ನುವವರೇ ನಮಗೆದುರಾಗಲಿ…

 

-ಜಿ.ಎಲ್.ಶಾಮ್ ಪ್ರಸಾದ್

© 2013 G.L Sham Prasad